ಬೆಂಗಳೂರು: ರಾಜ್ಯದ (karnataka) ಮುಜರಾಯಿ ದೇವಾಲಯಗಳಲ್ಲಿ (Temple ) ನಡೆಯುವ ಆರ್ಥಿಕ ಅಕ್ರಮ, ಕಾಣಿಕೆ ಕಳವು ಹಾಗೂ ಹಣ ದುರುಪಯೋಗಕ್ಕೆ ಶಾಶ್ವತ ತಡೆ ಒಡ್ಡಲು ಕರ್ನಾಟಕ ಹೈಕೋರ್ಟ್ (High court )ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ದೇವಾಲಯಗಳ ಆದಾಯ ಸೋರಿಕೆಯನ್ನು ತಡೆದು ಸಂಪೂರ್ಣ ಪಾರದರ್ಶಕತೆ ತರಲು ಧಾರ್ಮಿಕ ದತ್ತಿ ಇಲಾಖೆಗೆ ಕಟ್ಟುನಿಟ್ಟಿನ ಡಿಜಿಟಲ್ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ನ್ಯಾಯಪೀಠ ಸೂಚಿಸಿದೆ. ಭಕ್ತರು ನೀಡುವ ಪ್ರತಿಯೊಂದು ರೂಪಾಯಿ ಕಾಣಿಕೆಯೂ ದೇವರಿಗೆ ಸಲ್ಲುವ ಪವಿತ್ರ ಆಸ್ತಿಯಾಗಿದ್ದು, ಅದರ ದುರುಪಯೋಗವನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಉಡುಪಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸಿಬ್ಬಂದಿಯೊಬ್ಬರು ರಸೀದಿ ಪುಸ್ತಕ ದುರುಪಯೋಗಪಡಿಸಿಕೊಂಡು ಹಣ ವಂಚಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಐತಿಹಾಸಿಕ ತೀರ್ಪು ನೀಡಿದೆ. ದೇವಾಲಯಗಳಲ್ಲಿ ನಕಲಿ ರಸೀದಿಗಳ ಹಾವಳಿ ತಡೆಯಲು ತಕ್ಷಣವೇ ಕೇಂದ್ರೀಕೃತ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕು. ಇನ್ಮುಂದೆ ಪೂಜೆ, ಸೇವಾ ಟಿಕೆಟ್‌ಗಳು, ಕಾಣಿಕೆ ಹಾಗೂ ವಸತಿ ನಿಲಯಗಳ ಬುಕಿಂಗ್‌ಗಳಿಗೆ ಕಡ್ಡಾಯವಾಗಿ QR ಕೋಡ್ ಒಳಗೊಂಡ ಡಿಜಿಟಲ್ ರಸೀದಿಗಳನ್ನೇ ನೀಡಬೇಕು ಮತ್ತು ನಗದು ವ್ಯವಹಾರವನ್ನು ಸಾಧ್ಯವಾದಷ್ಟು ಕನಿಷ್ಠಗೊಳಿಸಿ UPI ಹಾಗೂ ಆನ್‌ಲೈನ್ ಪಾವತಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಹುಂಡಿ ಎಣಿಕೆ ಸಮಯದಲ್ಲಿ ನಡೆಯುವ ಕಳವು ತಡೆಯಲು ಹೈಕೋರ್ಟ್ ಅತ್ಯಂತ ಕಠಿಣ ನಿಯಮಗಳನ್ನು ರೂಪಿಸಿದೆ. ದೇವಾಲಯದ ಹುಂಡಿ ತೆರೆಯುವ ಮತ್ತು ಎಣಿಕೆ ಮಾಡುವ ಕೊಠಡಿಗಳಲ್ಲಿ ಕಡ್ಡಾಯವಾಗಿ ಉನ್ನತ ಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಷ್ಟೇ ಅಲ್ಲದೆ, ಹಣ ಎಣಿಕೆ ಕಾರ್ಯದಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬ ಸಿಬ್ಬಂದಿಯೂ ಕಡ್ಡಾಯವಾಗಿ ‘ಬಾಡಿ ಕ್ಯಾಮೆರಾ’ (Body Camera) ಧರಿಸುವುದನ್ನು ನಿಯಮಗೊಳಿಸಲಾಗಿದೆ. ಇದರಿಂದಾಗಿ ಎಣಿಕೆ ಪ್ರಕ್ರಿಯೆಯ ಪ್ರತಿಯೊಂದು ಕ್ಷಣವೂ ಸ್ಪಷ್ಟವಾಗಿ ಧ್ವನಿಸಹಿತ ಮುದ್ರಣಗೊಳ್ಳಲಿದ್ದು, ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಕಾವಲು ಕಾಯಬಹುದಾಗಿದೆ.
ಇದರೊಂದಿಗೆ ದೇವಾಲಯಗಳಿಗೆ ಸೇರಿದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು ಮತ್ತು ಸ್ಥಿರ-ಚರ ಆಸ್ತಿಗಳ ಸಮಗ್ರ ರಕ್ಷಣೆಗಾಗಿ ‘ಡಿಜಿಟಲ್ ದಾಸ್ತಾನು’ (Digital Inventory) ವ್ಯವಸ್ಥೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ. ಪ್ರತಿಯೊಂದು ಅಭರಣದ ತೂಕ, ಗುಣಮಟ್ಟ ಹಾಗೂ ಉನ್ನತ ಮಟ್ಟದ ಛಾಯಾಚಿತ್ರಗಳನ್ನು ಈ ವ್ಯವಸ್ಥೆಯಲ್ಲಿ ದಾಖಲಿಸಿಡಬೇಕಾಗುತ್ತದೆ. ಹೈಕೋರ್ಟ್‌ನ ಈ ಕ್ರಾಂತಿಕಾರಿ ಮಾರ್ಗಸೂಚಿಗಳು ರಾಜ್ಯದ ಸಾವಿರಾರು ಮುಜರಾಯಿ ದೇವಾಲಯಗಳ ಆಸ್ತಿ ಮತ್ತು ಭಕ್ತರ ಶ್ರದ್ಧೆಯ ಕಾಣಿಕೆಗೆ ಸಂಪೂರ್ಣ ಡಿಜಿಟಲ್ ರಕ್ಷಣೆ ನೀಡಲಿವೆ.
